SKSSF MANAVA SARAPALI | SB DARIMI

 ಸೌಹಾರ್ಧತೆಯ ಸಂಕಲ್ಪಕ್ಕೆ  ಸೌಂದರ್ಯದ ಲೇಪನ ಹಚ್ಚುವ ಮಾನವ ಸರಪಳಿ

ಎಸ್ ಬಿ ದಾರಿಮಿ

ಇಸ್ಲಾಂ ಧರ್ಮದ ಮೂಲ ತತ್ವಗಳಲ್ಲಿ ಒಂದಾಗಿದೆ ಸೌಹಾರ್ಧತೆ.


ಮುಸ್ಲಿಮರಿಗೆ ಅನ್ಯಾಯ ಮಾಡದ ,ಅವರೊಂದಿಗೆ ಸಮರ ಸಾರದ, ಅವರನ್ನು ಮನೆಗಳಿಂದ ಹೊರ ದಬ್ಬದ ಇತರ ಯಾವುದೇ ಸಮುದಾಯದವರೊಂದಿಗೆ ಉತ್ತಮ ರೀತಿಯ ಸಂಬಂದ ಸ್ಥಾಪಿಸಿ ಅವರಿಗೆ ತಮ್ಮಿಂದಾದ ಸೇವೆಗಳನ್ನು ನೀಡ ಬೇಕೆಂಬುದು ಇಸ್ಲಾಂ ಧರ್ಮದ ಪುಣ್ಯ ಗ್ರಂಥ ಕುರಾನ್ ನ ಸ್ಪಷ್ಟೋಕ್ತಿಯಾಗಿದೆ.

ಜಗತ್ತಿನಾದ್ಯಂತ ಇರುವ ಮುಸ್ಲಿಂ ಸಮುದಾಯ ಈ ಪ್ರಕಾರ ನಡೆದು ಕೊಳ್ಳುತ್ತಿದ್ದಾರೆ ಕೂಡಾ.

ಅದರೆ ಭಾರತ ದೇಶದಲ್ಲಿ ಇಲ್ಲಿನ ಕೆಲವೊಂದು ರಾಜಕೀಯ ಹಿತಾಸಕ್ತಿಗಳು ಮುಸ್ಲಿಮರ ಬಗ್ಗೆ ನಿರಂತರ ಅಪ ಪ್ರಚಾರದಲ್ಲಿ ತೊಡಗಿ ಹಿಂದುಗಳಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂಬುದು ಸುಳ್ಳಲ್ಲ.


ಸೋಶಿಯಲ್ ಮೀಡಿಯಾ ಬಂದ ನಂತರವಂತೂ ಈ ಅಪ ಪ್ರಚಾರ ಅತ್ಯಂತ ವ್ಯವಸ್ಥಿತವಾಗಿಯೇ ನಡೆಯುತ್ತಿದೆ.

ಇತಿಹಾಸದಲ್ಲಿ ನಡೆದ ಹಲವಾರು ಯುದ್ದ ಮತ್ತು ವಿಭಜನೆಗಳನ್ನು ಮುಂದಿಟ್ಟು ಈ ಅಪ ಪ್ರಚಾರವನ್ನು ಸಾಂಸ್ಥೀಕರಿಸಿ ಜನರ ಬ್ರೈನ್ ವಾಶ್ ಮಾಡುವುದರಲ್ಲಿ ಇವರು ಒಂದಿಷ್ಟು ಯಶಸ್ಸು ಕಂಡಿದ್ದಾರೆ.

ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯವಾಗಿ ಅವರಿಗೆ ಈ ಅಪ ಪ್ರಚಾರವೇ ಅಸ್ತ್ರ ವಾಗಿತ್ತು.

ಆದರೆ ಈ ಅಪ ಪ್ರಚಾರವನ್ನು ಮೆಟ್ಟಿ ನಿಂತು ಜನರಿಗೆ ಸತ್ಯ ತಿಳಿಸಿ ಕೊಡುವುದರಲ್ಲಿ ಮುಸ್ಲಿಂ ಸಮಾಜವೂ ಎಡವಿದೆ ಎಂದು ಹೇಳದಿರಲು ನಿರ್ವಾಹವಿಲ್ಲ.

ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ವಿದ್ಯಾರ್ಥಿ ಯುವಜನ ಪ್ರಸ್ಥಾನವಾದ ಎಸ್ಕೆ ಎಸ್ಸೆಸ್ಸೆಪ್ ಪ್ರತೀ ವರ್ಷ " ಮಾನವ ಸರಪಳಿ" ಎಂಬ  ವಿನೂತನ, ಪ್ರತಿಷ್ಟಿತ ಕಾರ್ಯಕ್ರಮ ಹಮ್ಮಿಕೊಂಡು ದೇಶದ ಶಾಂತಿ ಮತ್ತು ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾವಿರಾರು ಜನರನ್ನು ಸೇರಿಸಿ ಸೌಹಾರ್ಧತೆಯ ಸಂಕಲ್ಪ  ಮಾಡುವಾಗ ಅದರ ಭಾಗವಾಗಲು ನಾವೂ ನೀವೂ ಪ್ರಯತ್ನಿಸಿದರೆ ಅದರ ಮೌಲ್ಯ ಒಂದಷ್ಟು ಹೆಚ್ಚುತ್ತದೆ.


ಪುಣ್ಯ ಸಮಸ್ತದ ಪಂಡಿತ ಶಿರೋಮಣಿಗಳು ನಮಗೆ ತೊರಿಸಿ ಕೊಟ್ಟ  ಶಾಂತಿ,ಪ್ರೀತಿ,ಬಾತೃತ್ವದ ಪರಂಪರೆಯನ್ನು ಎತ್ತಿ ಹಿಡಿದು ನಾಡಿನಾದ್ಯಂತ ಎಲ್ಲಾ ಜನಾಂಗದ ಜೊತೆ ಸೌಹಾರ್ಧತೆಯಲ್ಲಿ ವರ್ತಿಸುವುದು ಕಾಲದ ಅನಿವಾರ್ಯವಾಗಿದೆ.

ನಮ್ಮ ದೇಶಕ್ಕೊಂದು ಬಲಿಷ್ಟ ಸಂವಿಧಾನ ಆಸ್ತಿತ್ವಕ್ಕೆ ಬಂದ ಜನವರಿ ಇಪ್ಪತ್ತಾರನ್ನು ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಆಯ್ಕೆ ಮಾಡಿದ್ದು ಆ ಉಲಮಾಗಳ ದೂರದೃಷ್ಟಿಯ ಉದಾಹರಣೆಯಾಗಿದೆ.

ಎಲ್ಲಾ ಧರ್ಮೀಯರಿಗೆ ಅವರವರ ಧರ್ಮವನ್ನು ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಆಚರಿಸಲು ಪ್ರಚುರ ಪಡಿಸಲು  ಮುಕ್ತ ಅವಕಾಶ ನೀಡುವ ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ಮಾದರಿಯಾಗಿದೆ.

ಹಾಗೆ ನೋಡುವುದಾದರೆ ಇಸ್ಲಾಂ ಧರ್ಮೀಯರಿಗೂ ಅವರ ಎಲ್ಲಾ ಆಚಾರಗಳನ್ನು ಇಷ್ಟು ಮುಕ್ತವಾಗಿ ಆಚರಿಸಲು ಸ್ವಾತಂತ್ರ್ಯ ಇರುವ ದೇಶ ಅದು ನಮ್ಮ ಈ ಭಾರತವಾಗಿದೆ.ಅದಕ್ಕೆ ಮುಖ್ಯ ಕಾರಣ ದೇಶದ ಸಂವಿಧಾನ ಮತ್ತು ಇಲ್ಲಿನ‌ ಬಹು ಸಂಖ್ಯಾತ ಹಿಂದೂ ಬಾಂದವರಾಗಿದ್ದಾರೆ.


ದೇಶದ ಇತಿಹಾಸದ ಉದ್ದಗಳಕ್ಕೂ ಯಾವತ್ತೂ ಹಿಂದು, ಮುಸ್ಲಿಂ ಈ ಎರಡು ಸಮುದಾಯ ಪರಸ್ಪರ ಶತ್ರುಗಳಾಗಿ ಮಾರ್ಪಾಡು ಆಗಲೇ ಇಲ್ಲ.

ಈ ದೇಶಕ್ಕೆ ಅಂತಹ ಬಲಿಷ್ಟವಾದ  ಸೌಹಾರ್ಧತೆಯ ಭವ್ಯ ಪರಂಪರೆಯೇ ಇದೆ.

ಆದ್ರೆ ಇತ್ತೀಚಿನ ವರ್ಷಗಳಿಂದ ಈ ಕುಲಗೆಟ್ಟ ಕುತ್ಸಿತ ಕೋಮು ರಾಜಕಾರಣದ ಚರ್ಚೆಗಳೇ ವಿಜ್ರಂಭಿಸುವುದರಿಂದ ಸೌಹಾರ್ಧತೆಯ ಆ ಭವ್ಯ ಪರಂಪರೆಯನ್ನು ಮೆಲುಕು ಹಾಕುವ ಚರ್ಚೆಗೆ ಮಂಕು ಕವಿದಿದೆ.

ದೇಶ ಪ್ರೇಮವನ್ನು ಧರ್ಮದ ಭಾಗ ಎಂದು ಪರಿಗಣಿಸಿದ ಧರ್ಮದ ಅನುಯಾಯಿಗಳಿಗೆ ಯಾವತ್ತೂ ದೇಶ ದ್ರೋಹಿಗಳೋ ಭಯೋತ್ಪಾದಕರೋ ಕೋಮುವಾದಿಗಳೋ ಆಗಲು ಸಾಧ್ಯವಿಲ್ಲ.

ಅದರೆ ಅದಕ್ಕೆ ಇಸ್ಲಾಂ ಧರ್ಮದ ನೀತಿ ನಿಯಮಾವಳಿಗಳನ್ನು ಕೇವಲ ಸೀಮಿತ ಪುಸ್ತಕಗಳಿಂದ ಮಾತ್ರ ಕಲಿತು ದೊಡ್ಡ ಫತ್ವಾಧಾರಿಗಳಾಗುವ ಬದಲು ಆಯಾ ಕಾಲದ ಅಗ್ರಗಣ್ಯ ಪಂಡಿತ ಶಿರೋಮಣಿಗಳ ಪ್ರಾಯೋಗಿಕ ನಿಲುವುಗಳ ಆಶ್ರಯ ಪಡೆದು ಅವರ ಮಾರ್ಗ ದರ್ಶನದಂತೆ ಯುವ ಪಡೆ  ಸಾಗ ಬೇಕಾಗಿದೆ.


ಗತಕಾಲದ ಯುದ್ದಾವರಿತ  ಸಂಧರ್ಭದಲ್ಲಿ ಅವತರಿಸಿದ ವಚನಗಳನ್ನು ಲಗಾಮಿಲ್ಲದೇ  ಸೋಶಿಯಲ್ ಮೀಡಿಯಾಗಳಲ್ಲಿ ಬಳಸುವ ಮೂಲಕ ವಿವಿಧ ಸಮುದಾಯಗಳಿಗೆ ಕೆಟ್ಟ ಸಂದೇಶ ರವಾನಿಸಿ ಇಸ್ಲಾಮಿಗೂ ಕೆಟ್ಟ ಹೆಸರು ತಂದು ಕೊಟ್ಟು ಹಿಂದೂ ಮುಸ್ಲಿಂ ದ್ರುವೀಕರಣಕ್ಕೆ ರಹದಾರಿ ಒದಗಿಸುತ್ತಿರುವ ಕೆಲವರು ಮುಸ್ಲಿಮರಿಗೆ ತೊಂದರೆಯನ್ನಲ್ಲದೇ ಬೇರೇನನ್ನೂ ಮಾಡುವುದಿಲ್ಲ.

ಉಲಮಾಗಳ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮಾತ್ರ ಇಲ್ಲಿ ಶಾಂತಿ ಮತ್ತು ಅಭಿವೃದ್ದಿ ಗೆ ನಮಗೆ ಕೊಡುಗೆ ನೀಡಲು ಸಾಧ್ಯ.

ಈ ನಿಟ್ಟಿನಲ್ಲಿ ಎಸ್ಕೆ ಎಸ್ಸೆಸ್ಸೆಪ್ ವಿವಿಧ  ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿರುವ ಮಾನವ ಸರಪಳಿಯ ಕೊಂಡಿಗಳಾಗುವುದು ನಮ್ಮದೇ ಅಗತ್ಯವಾಗಿದೆ.


ಎಸ್ ಬಿ ದಾರಿಮಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು