ಮಿಲಾದ್ ಆಚರಣೆ ಅರ್ಥ ಪುರ್ಣವಾಗಿರಲಿ, ಸಬ್ಯತೆಯ ಮಿತಿ ಇರಲಿ

ಮಿಲಾದ್ ಆಚರಣೆ ಅರ್ಥ  ಪುರ್ಣವಾಗಿರಲಿ, ಸಬ್ಯತೆಯ ಮಿತಿ ಇರಲಿ

ಎಸ್ ಬಿ ದಾರಿಮಿ


ಅದು ಕುಲ,ಗೋತ್ರ,ಪಂಗಡದ ಹೆಸರಲ್ಲಿ ಕಲಹಿಸುತ್ತಿರುವ  ಅನಾಗರಿಕ ಜನಾಂಗ.
ಕಣ್ಣಿಗೆ ಕಂಡದ್ದನ್ನೆಲ್ಲಾ ದೇವರೆಂದು ಪೂಜಿಸಿ ಒಂದೊಂದು ಕುಲಕ್ಕೆ ಒಂದೊಂದು ಮೂರ್ತಿಗಳನ್ನು ಇಟ್ಟುಕೊಂಡು ಅದನ್ನು ದೇವರೆಂದು ನಂಬಿ  ಪೂಜಿಸುತ್ತಾ ಇದ್ದ ಜನಾಂಗ.
ಮದ್ಯಪಾನ,ಜೂಜು,ವ್ಯಬಿಚಾರ,ಅಕ್ರಮ,ಅನ್ಯಾಯ,ದಬ್ಬಾಳಿಕೆಗಳೇ ಮೇಲೈಸಿದ್ದ ಜನಾಂಗ.
ಹೆಣ್ಣು ಹುಟ್ಟಿದರೆ ಅವಮಾನವೆಂದು ಅನುಮಾನಿಸಿ ಜೀವಂತ ಹೂಳಲೂ ಹೇಸದ ಜನಾಂಗ.
ಇಂತಹ ಕಠಿಣ ಕಠೋರ  ಸಾಮಾಜಿಕ ಪರಿಸರದಲ್ಲಿ ಅನಾಥರಾಗಿ ಹುಟ್ಟಿ ಬಂದ ಮುಹಮ್ಮದ್ ಪೈಗಂಬರ್ ಸ ಅ ತನ್ನ ಕೊನೆಯ ಇಪ್ಪತ್ತ ಮೂರು ವರ್ಷಗಳ ಅವಧಿಯಲ್ಲಿ ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಿದ ಒಬ್ಬ ಅದ್ವಿತೀಯ ಮಹಾ ಪುರುಷನಾಗಿ ಹೊರ ಹೊಮ್ಮಿದರು.


ಮಾನವರೆಲ್ಲಾ  ಒಂದೇ ತಂದೆ ತಾಯಿಯ ಮಕ್ಕಳೆಂದೂ ಅವರನ್ನೆಲ್ಲಾ ಸೃಷ್ಟಿಸಿದ್ದು ಒಂದೇ ಮೂಲ ಶಕ್ತಿಯಾಗಿರುವ ದೇವನೆಂದೂ ಅವನಿಗೆ ಹಲವಾರು ನಾಮಗಳಿವೆಯೆಂದೂ ನಿಮ್ಮ ಆರಾಧನೆಗಳೇನಿದ್ದರೂ ಅವನ ಮುಂದೆ ಮಾತ್ರ ಸಲ್ಲಿಸ ಬೇಕೆಂದೂ ಉಳಿದಂತೆ ಇತರ ಎಲ್ಲಾ ಜೀವಜಾಲಗಳು ಆತನ ಸೃಷ್ಟಿಯೆಂದೂ, ಸೃಷ್ಟಿಗಳು ತಮ್ಮಲ್ಲಿ ಪರಸ್ಪರ ಗೌರವಯುತವಾಗಿ ನಡೆದು ಕೊಳ್ಳಬೇಕೆಂದೂ ಆದರೆ ನಿಮ್ಮ ಧರ್ಮಕ್ಕೆ ಸೇರದವರನ್ನು ನೀವು ಬಲವಂತದಿಂದ ಮತಾಂತರಿಸ ಬಾರದೆಂದೂ ,ಅನ್ಯ ಧರ್ಮೀಯರಿಗೂ ನೀವು ಒಳಿತನ್ನೇ ಮಾಡಬೇಕೆಂದೂ,ಇತರರ ಆರಾಧ್ಯ ಮೂರ್ತಿಗಳ ಬಗ್ಗೆ  ಯಾವ ಕಾರಣಕ್ಕೂ ಅಸಭ್ಯ ಪದಗಳನ್ನು ಆಡ ಬಾರದೆಂದೂ ಇತ್ಯಾದಿ ಬರೀ ಮಾನವೀಯ ಮೌಲ್ಯಗಳನ್ನು ಮಾತ್ರ  ಜಗತ್ತಿಗೆ ಸಾರುತ್ತಾ ಈ ಲೋಕಕ್ಕೆ ವಿದಾಯ ಹೇಳಿದ ಪ್ರವಾದಿ ಮುಹಮ್ಮದ್ ಸ ಅ ರವರ ಜನ್ಮ ದಿನಾಚರಣೆ ಮಾಡುವಾಗ ಅದು ಇಡೀ ಜಗತ್ತಿಗೇ ಮಾದರಿಯುಕ್ತವಾಗಿರ ಬೇಕೆಂದು ಬೇರೆ ಹೇಳಬೇಕಾಗಿಲ್ಲ.



ಬರೀ ಕಾಟಾಚಾರಕ್ಕೆ ಒಂದು ಕಾರ್ಯಕ್ರಮ ಆಗಿರದೇ ,ಅವರ ಉತ್ತಮ ಸಂದೇಶವನ್ನು ಸಬ್ಯ ರೀತಿಯಲ್ಲಿ ಜನರಿಗೆ ತಿಳಿ  ಹೇಳುವ ಅಚ್ವುಕಟ್ಟಿನ ಕಾರ್ಯ ಕ್ರಮವಾಗಿರ ಬೇಕು.
ಕೇವಲ ಬಿರಿಯಾಣಿ ಊಟಕ್ಕಾಗಿ ಮಸೀದಿಯ ಎದುರಲ್ಲಿ ಪೈಪೋಟಿ ನಡೆಸುವ ಕಾರ್ಯಕ್ರಮವಾಗಿರದೇ ಮೆರವಣಿಗೆಯಿಂದ ಹಿಡಿದು ಕಟೌಟ್ ತನಕ  ಮೀಲಾದ್ ಪ್ರಯುಕ್ತ ಹಮ್ಮಿಕೊಳ್ಳುವ ಪ್ರತಿಯೊಂದೂ ವಿಚಾರಗಳೂ ಅರ್ಥ ಪೂರ್ಣವಾಗಿರ ಬೇಕು.
ಮೆರವಣಿಗೆಯಲ್ಲಿ ಬರೀ ಮಕ್ಕಳನ್ನು ಮಾತ್ರ ನಿಲ್ಲಿಸದೇ ಊರಿನ ಶ್ರೀಮಂತನಿಂದ ಹಿಡಿದು ಕೂಲಿ ಕಾರ್ಮಿಕನೂ ಒಂದೇ ಸಾಲಿನಲ್ಲಿ ನಿಲ್ಲಬೇಕು.
ಮಸೀದೆಯಲ್ಲಿ ನಮಾಜ್ ಗೆ ನಿಲ್ಲುವ ಅದೇ ಶಿಸ್ತಿನಲ್ಲಿ!
ಅನಗತ್ಯ ಘೋಷಣೆಗಳನ್ನು ಕೂಗದೇ ದೇಶ ಪ್ರೇಮ ಸಾರುವ ಮತ್ತು ಪ್ರವಾದಿ ಸಂದೇಶದ ತುಣುಕುಗಳಿಗೆ ಮಾತ್ರ ಸ್ಥಾನವಿರಬೇಕು.
"ಬದ್ರಿಲ್ ಕೇಟ ಮುದ್ರವಾಖ್ಯ" ಸದ್ಯ ಖಂಡಿತ ಇಲ್ಲಿ ಅಗತ್ಯ ಇಲ್ಲ.
ತಕ್ಬೀರ್ ಸಲಾತ್ ಇರಲಿ.


ಹಸಿರು ದಾರ ತಲೆಗೆ ಕಟ್ಟಿ ಸಾಧಿಸಲಿಕ್ಕೇನೂ ಇಲ್ಲ.
ಇತರ ಕೆಲ  ಕೋಮು ಸಂಘಟನೆಗಳ ರೀತಿ ರಿವಾಜು ನಮಗೆ ಹೇಳಿಸಿದ್ದಲ್ಲ.
ಮಸೀದಿಯಲ್ಲಿ ನಡೆಯವ ಮೌಲಿದ್ ಮಜ್ಲಿಸಿನಲ್ಲಿ ಹಾಜರಾಗಲು ವಿಶೇಷ ಕಾಳಜಿ ವಹಿಸಿ.
ಮಕ್ಕಳೂ ಭಾಗವಹಿಸುವಂತೆ ನೋಡಿ ಕೊಳ್ಳಿ.
ಸಭಾ ಕಾರ್ಯಕ್ರಮಗಳು ಶಿಸ್ತುಬದ್ದವಾಗಿರಲಿ.
ಊರಿನ ಇತರ ಸಹೋದರ ದರ್ಮೀಯರಾದ ಹಿಂದು ಕ್ರೈಸ್ತ ಮುಖಂಡರನ್ನು ಆದಷ್ಟು ಆಹ್ವಾನಿಸಿ.
ಊರಿನ‌ ಹಿರಿಯ ಜನ ಸೇವಕರಿಗೆ,ಪ್ರತಿಭಾವಂತರಿಗೆ ಧರ್ಮ ನೋಡದೇ ಸನ್ಮಾನಿಸಿ.


ಊರಿನ‌ ಬಡ ಬಗ್ಗರಿಗೆ ಧರ್ಮ ನೋಡದೇ ಸಹಾಯ ಹಸ್ತ ನೀಡುವ ಸಣ್ಣ ಕಾರ್ಯವನ್ನಾದರೂ ಹಮ್ಮಿಕೊಳ್ಳಿ.
ನೆನಪಿರಲಿ,
ಕಾಲ ಬದಲಾದಂತೆ ನಮ್ಮ 
 ಕಾರ್ಯ ವೈಖರಿಗಳೂ ಬದಲಾಗ ಬೇಕು.ಆಗ ಮಾತ್ರ ನಮಗೆ ಒಂದುತ್ತಮ ಸಮಾಜ ಆಗಲು ಸಾದ್ಯ.!💐

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು