ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ಆತ್ಮಹತ್ಯೆ
ದಾವಣಗೆರೆ: ನಿಸರ್ಗ ಸಂರಕ್ಷಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರ್ (70) ಸೋಮವಾರ ರಾತ್ರಿ ಗ್ರಾಮದ ಮಧ್ಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಿಸರ್ಗ ಸಂರಕ್ಷಕ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರ್ |
ಸಾಲುಮರದ ವೀರಾಚಾರ್, ರಾಜ್ಯದ ಜನಪ್ರಿಯ ವ್ಯಕ್ತಿಯಾಗಿದ್ದು, ದಾವಣಗೆರೆ ಮತ್ತು ಹರಿಹರ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲು ಮರಗಳನ್ನು ನೆಟ್ಟು ಪೋಷಣೆ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು. ನಿಸರ್ಗವನ್ನು ಸಂರಕ್ಷಿಸಲು ಅವರ ಶ್ರಮ ಹಾಗೂ ಪರಿಸರ ಕಾಳಜಿಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಹಿರಿಯ ಪರಿಸರವಾದಿ ಮಿಟ್ಲಗಟ್ಟೆ ನ್ಯಾಯಬೆಲೆ ಅಂಗಡಿ ವಿಚಾರವಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ನ್ಯಾಯಬೆಲೆ ಅಂಗಡಿಯನ್ನು ಬೇರೆಯವರಿಗೆ ವಹಿಸಿಕೊಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಈ ವಿಚಾರದಲ್ಲಿ ತನ್ನ ಬೇಡಿಕೆಗಳು ಮತ್ತು ಮನವಿಗಳು ಈಡೇರದ ಕಾರಣ ಮನನೊಂದ ವೀರಾಚಾರ್ ಆತ್ಮಹತ್ಯೆಗೆ ಶರಣಾಗಲು ಮುಂದಾದರು ಎಂದು ತಿಳಿದುಬಂದಿದೆ.
ಅವರ ಆತ್ಮಹತ್ಯೆ ಸುದ್ದಿ ತಿಳಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬೇಡಿಕೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.
ದಾವಣಗೆರೆಯ ಮಿಟ್ಲಗಟ್ಟೆ ಸಾಲುಮರದ ವೀರಾಚಾರ್ ಎಂದೇ ಖ್ಯಾತಿ ಪಡೆದಿರುವ ಈ ಹಿರಿಯ ನಿಸರ್ಗ ಸಂರಕ್ಷಕರು 3000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಪ್ರಕೃತಿಯನ್ನು ಸಂರಕ್ಷಿಸುವ ಅವರ ನಿರಂತರ ಪ್ರಯತ್ನ ಮತ್ತು ಸೇವೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ.
ಮಿಟ್ಲಗಟ್ಟೆಯ ನ್ಯಾಯಬೆಲೆ ಅಂಗಡಿಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅವರು, ‘ನ್ಯಾಯಾಲಯ, ಜನ, ದೇವರು ನ್ಯಾಯ ಕೊಡಿಸದಿದ್ದರೆ ನೇಣಿಗೆ ಶರಣಾಗುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದರು ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ನಿರೀಕ್ಷಿತ ಸ್ಪಂದನೆ ಸಿಗದಿದ್ದಾಗ, ಅವರ ಆಣತಿಯಂತೆ ಸೋಮವಾರ ನಸುಕಿನ 2 ಗಂಟೆ ಸುಮಾರಿಗೆ ಮನನೊಂದ ಸಾಲುಮರದ ವೀರಾಚಾರ್ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.
Tags:
News