ಮುಸ್ಲಿಮರಿಗೆ ನಿರ್ಬಂಧ ಯಾಕೆ ?ಮಹೇಶ್ ರಾಜ್ ನೆಲಮಂಗಲ

ಮುಸ್ಲಿಮರಿಗೆ ನಿರ್ಬಂಧ ಯಾಕೆ ?
ಒಂದು ಧರ್ಮಕ್ಕೆ ಸೀಮಿತವಾಗಿ ವ್ಯಾಪಾರ ನಿರ್ಬಂಧಗಳಿಗೆ ಪ್ರತಿಯೊಂದು ಧರ್ಮದಲ್ಲಿರುವ ಅತಿಸಣ್ಣ ಸಂಕುಚಿತ ವರ್ಗಗಳು ಕಾರಣ. ಇವರುಗಳು ಹೇಳುವ ಮಾತನ್ನು ಇವರ ಮನೆಯವರೇ ಕೇಳುವುದಿಲ್ಲ. ಹಿಂದೂಗಳಾಗಲೀ ಮಸಲ್ಮಾನರಾಗಲೀ ಪರಸ್ಪರ ಧರ್ಮದೊಂದಿಗೆ ವ್ಯಾಪಾರ ವ್ಯವಹಾರ ಮಾಡಬೇಡಿ ಎಂದರೆ ಕೇಳುವವರು ಬಹುಶಃ ಶೇಕಡಾ ಒಂದರಷ್ಟೂ ಇರುವುದಿಲ್ಲ. ಅಷ್ಟಕ್ಕೂ ಜಾತ್ರೆಗಳಲ್ಲಿ, ದೇವಸ್ಥಾನದ ಹಬ್ಬಗಳಲ್ಲಿ, ಅಥವಾ ಉರೂಸುಗಳಲ್ಲಿ ಬರುವ ಅನ್ಯಮತೀಯ ಅಂಗಡಿಗಳು ಎಲ್ಲೋ ಹತ್ತಿಪ್ಪತ್ತಷ್ಟೇ. ಅದೂ ಕೂಡ ಎಲ್ಲಾದರೂ ವರ್ಷಕ್ಕೊಮ್ಮೆ ಬೇರೆ ಕಡೆಗಿಂತ ಸ್ವಲ್ಪ ಜಾಸ್ತಿ ಆದಾಯ ಸಿಗುತ್ತದೆ ಎಂಬ ಕಾರಣಕ್ಕಷ್ಟೆ. ಅಷ್ಟಕ್ಕೇ ಆ ಹತ್ತಿಪ್ಪತ್ತು ವ್ಯಾಪಾರಿಗಳು ಭಿಕ್ಷಾಪಾತ್ರೆಯನ್ನು ಎತ್ತಿಕೊಂಡು ತಿರುಗುತ್ತಿದ್ದಾರೆ ಎಂದು ಭ್ರಮೆಯಲ್ಲಿದ್ದವರ ಬಗ್ಗೆ ನಗು ಬರುತ್ತಿದೆ. ತನ್ನ ಬಾವಿಯೇ ಪ್ರಪಂಚ ಎಂದು ತಿಳಿದಿರುವ ಕಪ್ಪೆಯ ಕಥೆ ನೆನಪಿಗೆ ಬರುತ್ತಿದೆ.  ವ್ಯಾಪಾರ-ವ್ಯವಹಾರವನ್ನು ಧರ್ಮ ಜಾತಿಗಳ ಆಧಾರದ ಮೇಲೆ ನಡೆಸಲಾಗುವುದಿಲ್ಲ, ಪ್ರಾಯೋಗಿಕವಾಗಿ ಅದು ಸಾಧ್ಯವೂ ಇಲ್ಲ. ಒಂದು ಧರ್ಮದವನ ವ್ಯಾಪಾರಕ್ಕೆ ಮತ್ತೊಂದು ಧರ್ಮದವನು ಬರಬೇಕೆಂದರೆ ಅವನು ಈ ಮೊದಲು ಮಾಡುತ್ತಿರುವ  ವ್ಯಾಪಾರವನ್ನೋ ವೃತ್ತಿಯನ್ನೋ ಸ್ಥಳಚನ್ನೋ ತೊರೆದೇ ಬರಬೇಕು. ಯಾವುದೋ ಸಂಘಟನೆಯವ್ರು ಅಥವಾ ಪಕ್ಷದವರು ಕರೆ ಕೊಟ್ಟ ಮಾತ್ರಕ್ಕೆ ಇಡೀ ದೇಶ ಒಂದಾಗಿ ಇವರ ಮಾತು ಕೇಳುತ್ತದೆ ಎಂದು ಭ್ರಮಿಸಿ ಬದುಕುತ್ತಿರುವ ಬುದ್ಧಿಹೀನರಿಗೆ ಯಾವ ಬುದ್ಧಿಮಾತೂ ಅರ್ಥವಾಗುವುದಿಲ್ಲ. ನೀವು ಅದು ಹೇಗೆ ಆಲೋಚಿಸಿದರೂ ಭಾರತದ ಮುಸ್ಲಿಮರ ಕೊಂಡುಕೊಳ್ಳುವ ಶಕ್ತಿ ಎಲ್ಲರಿಗಿಂತ ಜಾಸ್ತಿ. ಅವರಲ್ಲಿ ವ್ಯಾಪಾರಿಗಳು ಕೂಡ ಜಾಸ್ತಿ. ಭಾರತದಲ್ಲಿ ಅವರ ಜನಸಂಖ್ಯೆ ಸುಮಾರು ಮೂವತ್ತು ಕೋಟಿ ಇದೆ. ಕೇವಲ ಒಂದು ಕೋಟಿ ಜನಸಂಖ್ಯೆ ಇರುವ ದೇಶಗಳು ಕೂಡ ಸ್ವಾವಲಂಬಿಯಾಗಿ ಬದುಕಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ. ಹೀಗಿರುವಾಗ ಮೂವತ್ತು ಕೋಟಿ ಜನಸಂಖ್ಯೆ ಇರುವ ದೊಡ್ಡ ಜಾಗತಿಕ ಸಮುದಾಯವನ್ನು ಜಾತ್ರೆಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡದಿರುವುದರ ಮೂಲಕ ಮೂಲಕ ಬಡತನಕ್ಕೆ ತಳ್ಳುತ್ತೀದ್ದೇವೆ ಎಂದು ಭ್ರಮಿಸುವವರಿಗೆ ನಿಜಕ್ಕೂ ಮಾನಸಿಕ ರೋಗವಿದೆಯೆಂದೇ ತಿಳಿಯಬೇಕು. ಪ್ರಪಂಚದ ಸುಮಾರು 150 ಕ್ಕಿಂತ ಹೆಚ್ಚಿನ ರಾಷ್ಟ್ರಗಳು 5 ಕೋಟಿ ಜನಸಂಖ್ಯೆಯ ಒಳಗಿರುವ ರಾಷ್ಟ್ರಗಳೇ. ಅದರಲ್ಲಿ 20 ಕ್ಕಿಂತಲೂ ಹೆಚ್ಚು ಮುಸ್ಲಿಂ ರಾಷ್ಟ್ರಗಳೇ ಇವೆ. ಅವರೊಳಗೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಪ್ರಪಂಚದ ಮುಂಚೂಣಿ ರಾಷ್ಟ್ರಗಳಾಗಿವೆ. ಹೀಗಿರುವಾಗ ಭಾರತದ ಮೂವತ್ತು ಕೋಟಿ ಮುಸಲ್ಮಾನರು ಅವರೊಳಗೆ ವ್ಯಾಪಾರ ವ್ಯವಹಾರ ಮಾಡಿ ಆರ್ಥಿಕ ಶಕ್ತಿಯಾಗಿ ನಿಲ್ಲಲಾಗದೇ? ಮುಸ್ಲಿಮರು ನಿಜಕ್ಕೂ ಶ್ರಮಜೀವಿಗಳು. ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯದ ವಿಚಾರದಲ್ಲಿ ಹಿಂದೆಮುಂದೆ ನೋಡದೇ ಅದಕ್ಕೇ ಹೆಚ್ಚು ವ್ಯಯಿಸುವವರು. ನೀವು ಎಲ್ಲಾದರೂ ಕೇಳಿದ್ದೀರ? ಆಹಾರದ ಕಾರಣದಿಂದ ಮುಸಲ್ಮಾನರು ಸಾಯುವುದು? ಆರೋಗ್ಯದ ವಿಚಾರದಲ್ಲಿ ಹಣಕಾಸು ವ್ಯವಸ್ಥೆಯಿಲ್ಲದೆ ಸಾಯುವುದು? ಹಣದ ಅಭಾವದಿಂದ ಶಿಕ್ಷಣ ಪಡೆಯದೇ ಇರುವುದು? ಹಾಗಾದರೆ ಇದಕ್ಕೆಲ್ಲ ವ್ಯಯಿಸುವ ಹಣ ಹೋಗುವುದು ಹೆಚ್ಚಿನ ಪ್ರಮಾಣದಲ್ಲಿ ಹಿಂದೂಗಳ ಸಂಸ್ಥೆಗಳಲ್ಲವೇ?..ಆರ್ಥಿಕ ಬಹಿಷ್ಕಾರದ ಕಾರಣದಿಂದ ಒಂದೊಮ್ಮೆ ಮುಸಲ್ಮಾನರು ಅವರ ಸಮುದಾಯಕ್ಕೆ ಸೀಮಿತವಾಗಿ ಆಸ್ಪತ್ರೆಗಳು, ಶಾಲೆಗಳು, ಮಾಧ್ಯಮ, ಸಾರಿಗೆ ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ಭೂಮಿಕೆ ನಿಭಾಯಿಸಲು ಆರಂಭಿಸಿದರೆ ನಷ್ಟ ಹಿಂದೂಗಳಿಗೆ ಹೊರತು ಮುಸ್ಲಿಮರಿಗಲ್ಲ. ವಸ್ತ್ರ ವ್ಯಾಪಾರದಲ್ಲಿ ಹಿಂದೂಗಳಿಗಿಂತ ಮುಸಲ್ಮಾನರು ಹೆಚ್ಚಿಗೆ ಖರೀದಿಸುತ್ತಾರೆ ಎನ್ನಲಾಗದಿದ್ದರೂ ಕೂಡ ಹೆಚ್ಚು ಕಡಿಮೆ ಸರಿಸಮಾನವಾಗಿ ಖರೀದಿಸುತ್ತಾರೆ. ಈ ಉದ್ಯಮದಲ್ಲಿ ಭಾರತದಾದ್ಯಂತ ಹೆಚ್ಚು ತೊಡಗಿಸಿಕೊಂಡಿರುವವರು ಗುಜರಾತಿ ಮಾರ್ವಾಡಿಗಳು ಮತ್ತು ದೇಶದ ಇತರ ಹಿಂದೂಗಳು. ಒಂದೊಮ್ಮೆ ಮುಸಲ್ಮಾನರು ಹಿಂದೂಗಳ ವಸ್ತ್ರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದರೆ ಕಳೆದುಕೊಳ್ಳುವುದು ಯಾರು? ಕೊರೊನಾ ಸಂದರ್ಭದಲ್ಲಿ ವ್ಯಾಪಕವಾದ ಮುಸಲ್ಮಾನರ ವಿರುದ್ಧದ ಅಪಪ್ರಚಾರಕ್ಕೆ ನೊಂದು ಮುಸಲ್ಮಾನರು ರಮ್ಜಾನ್- ಬಕ್ರೀದ್ ಖರೀದಿಗೆ ಬರದಿದ್ದಾಗ ಕಳೆದುಕೊಂಡಿದ್ದು ಯಾರು? ಹೀಗಾದರೆ ಹದಗೆಡುವುದು ದೇಶದ ಆರ್ಥಿಕ ಪರಿಸ್ಥಿತಿ ಅಲ್ಲವೇ? ಹೀಗೆ ಆರ್ಥಿಕ ಬಹಿಷ್ಕಾರಗಳನ್ನು ಹಾಕಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದವನು ದೇಶಪ್ರೇಮಿಯಾಗುತ್ತಾನಾ? ದೇಶದ್ರೋಹಿಯಾಗುತ್ತಾನಾ?

ಹೇಳುತ್ತಾ ಹೋದರೆ ಬಹಳಷ್ಟು ವಿಚಾರಗಳಿವೆ. ಭಾರತದಲ್ಲಿ ಸುಮಾರು ಮೂವತ್ತು ಕೋಟಿಯಷ್ಟಿರುವ ಜಗತ್ತಿನ ಅತಿ ದೊಡ್ಡ ಸಮುದಾಯವಾದ ಮುಸ್ಲಿಂ ಸಮುದಾಯಕ್ಕೆ ಜಾತ್ರೆಗಳಲ್ಲಿ ಅವಕಾಶ ನೀಡದಿರುವ ಮೂಲಕ ಮತ್ತು ಕೋಳಿ ಕುರಿಗಳನ್ನು ತಾವೇ ಮಾರುವುದರ ಮೂಲಕ ಬಿಸಿ ಮುಟ್ಟಿಸುತ್ತಿದ್ದೇವೆ ಎಂಬ ಭ್ರಮಾಲೋಕದಲ್ಲಿರುವವರಿಗೆ ದಲಿತರು ಸಹಕರಿಸದಿರಿ. ಇದು ಹಿಂದೂ ನಾವೆಲ್ಲ ಒಂದು ಎಂದು ಯಾಮಾರಿಸಿ ನಮ್ಮನ್ನು ಮುಸ್ಲಿಮರಿಂದ ದೂರ ಮಾಡಿ, ಅವರು ದೂರಾದ ನಂತರ ಅಸಹಾಯಕರಾಗುವ ನಮ್ಮನ್ನು ಕಾಡಿ, ನಂತರ ಸಂವಿಧಾನ ಬದಲಿಸಿ ಮೀಸಲಾತಿಗೆ ಗತಿ ಕಾಣಿಸುವ ದುರಾಲೋಚನೆಯಿಂದ ಕೂಡಿದ ಯೋಜನೆ. ಮುಸ್ಲಿಮ್ ಸಹೋದರರೇ, ನಿಮಗೂ ಒಂದು ಕಿವಿಮಾತು- ಯಾರೋ ಕರೆ ಕೊಟ್ಟರೆಂದು ನಾವು ನಿಮ್ಮಲ್ಲಿ ಖರೀದಿಸುವುದನ್ನು ಬಿಡುವಷ್ಟು ಮೂರ್ಖರು ನಾವಲ್ಲ. ನಿಮ್ಮ ಧರ್ಮದಲ್ಲೂ ಸಣ್ಣ ಪ್ರಮಾಣದಲ್ಲಿ ಹೀಗೆಲ್ಲ ಕರೆಕೊಡುವ ಮೂರ್ಖರಿದ್ದಾರೆ. ಅವರ ಕರೆಗೆ ಓಗೊಟ್ಟು ನೀವು ಹಿಂದೂಗಳ ವ್ಯಾಪಾರ ಬಹಿಷ್ಕಾರ ಮಾಡಬೇಡಿ. ಹಾಗೆ ಮಾಡಿದರೆ ಈ ಸಮಾಜಘಾತುಕ ರಾಜಕೀಯ ಉದ್ದೇಶದ ಶಕ್ತಿಗಳಿಗೂ ನಿಮಗೂ ವ್ಯತ್ಯಾಸ ಉಳಿಯುವುದಿಲ್ಲ. ಬಹುಸಂಖ್ಯಾತ ಹಿಂದುಗಳು ನಿಮ್ಮನ್ನು ಪ್ರೀತಿಸುತ್ತಾರೆ. ಬಹುಸಂಖ್ಯಾತ ಮುಸಲ್ಮಾನರು ಕೂಡ ಹಿಂದೂಗಳನ್ನು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಅನ್ಯೋನ್ಯವಾಗಿದ್ದಾರೆ. ವ್ಯಾಪಾರ ಬಹಿಷ್ಕಾರ ಮಾಡಿದ ಮಾತ್ರಕ್ಕೆ ಭಿಕ್ಷಾಪಾತ್ರೆ ಹಿಡಿಯುತ್ತೀರಿ ಎನ್ನುವ ಯಾವುದೇ ಭಯಕ್ಕೆ ನೀವು ಒಳಗಾಗದಿರಿ. ಸೌಹಾರ್ದದಿಂದ ಕೂಡಿದ ಸಮಾಜವನ್ನು ಒಡೆಯುವ ಬ್ರಿಟಿಷರ ಮನಸ್ಥಿತಿಯಿದು. ನಾವು ದಲಿತರು, ಹಿಂದುಳಿದವರು, ಮುಸಲ್ಮಾನರು ಒಂದಾಗಿರೋಣ. ನೋಡುತ್ತಿರಿ,,, ಈ ಪ್ರಕರಣದಿಂದ ನಿಮ್ಮ ವ್ಯಾಪಾರ- ವ್ಯವಹಾರ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ರಾಮಮಂದಿರ -ಬಾಬರಿ ಮಸೀದಿ ಆಯಿತು. ಹಲಾಲ್, ಲವ್ ಜಿಹಾದ್, ತಲಾಖ್, ತಬ್ಲೀಗಿ, ಕಾಶ್ಮೀರ ಫೈಲ್ ಆಯಿತು. ಪ್ರತಿ 3 ತಿಂಗಳಿಗೊಮ್ಮೆ ಸಂಘಿಗಳ ಒಂದೊಂದು ಅಜೆಂಡಾ ಜಾರಿಯಾಗುತ್ತಿದೆ ಅಷ್ಟೆ. ಬಡಪಾಯಿ ಮುಸ್ಲಿಮರನ್ನು ತೋರಿಸಿ ಹಿಂದೂಗಳನ್ನು ಹೆದರಿಸುವುದಷ್ಟೇ ಇವರ ಜಾಯಮಾನ. ಇವರ ಮತ್ತು ಇವರ ನಾಯಕರ ಉನ್ನತ- ಶ್ರೀಮಂತ ಮುಸ್ಲಿಮರೊಂದಿಗಿನ ವೈವಾಹಿಕ ಸಂಬಂಧಗಳು ಮತ್ತು ವ್ಯಾವಹಾರಿಕ ಸಂಬಂಧಗಳು ನಿರಾಯಾಸವಾಗಿ ಜಾರಿಯಲ್ಲಿದೆ. ಇವರ ರಾಜಕೀಯ ಅಸ್ತಿತ್ವಕ್ಕಾಗಿ ಬಡಪಾಯಿ ಹಿಂದೂ ಮುಸಲ್ಮಾನರನ್ನು ಹೀಗೆ ಆಡಿಸುತ್ತಿದ್ದಾರಷ್ಟೇ. ಈ ವ್ಯಾಪಾರ ಬಹಿಷ್ಕಾರದಿಂದ ಏನೂ ಆಗುವುದಿಲ್ಲ ಎನ್ನುವುದಕ್ಕೆ ನಿಮಗೊಂದು ಪುರಾವೆ ಕೊಡುತ್ತೇನೆ. ಹಲಾಲ್ ಕಟ್ಟು ಬದಲಾಗಿ ಜಟಕಾ ಕಟ್ಟು ಆರಂಭ ಮಾಡಿದವನು ಪಾಪ ಮನೆಯಲ್ಲಿ ಜರ್ದಾ ಬೀಡಾ ಜಡಿಯುತ್ತಿದ್ದಾನೆ. ಇಷ್ಟೇ.. ಸುಮ್ಮನಿರಿ, ಏನೂ ಮಾತನಾಡಲು ಹೋಗಬೇಡಿ. ಏನೂ ಆಗುವುದೂ ಇಲ್ಲ. ಮುಸ್ಲಿಮರ ವಿರುದ್ಧ ಮಾತನಾಡುವುದೆಂದರೆ ಕೆಲವರಿಗೆ ಮಂಗನಿಗೆ ಕಳ್ಳು ಕುಡಿಸಿದ ಹಾಗೆ. ಇಳಿದ ಮೇಲೆ ಮಂಗ ತನ್ನ ಪಾಡಿಗೆ ತಾನಿರುತ್ತದೆ. 
ಮಹೇಶ್ ರಾಜ್ ನೆಲಮಂಗಲ  
ಜೈ ಭೀಮ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು